ಬಹಿರಂಗ ಎನ್ನುವುದಕ್ಕಿಂತಲೂ ಒಂದು ಮುಕ್ತ ಪತ್ರ.
ಖಾಸಗಿಯಾರಬೇಕಿತ್ತೆನೋ ಅಂತಾ ಅನ್ನಿಸಿದ ಮೇಲೆಯೂ ಪತ್ರ ವಸೀ ದೀರ್ಘವಿರುವ ಕಾರಣ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಮತ್ತು ಹೆಚ್ಚಿನವರು ಓದಲಾರರೆಂಬ ಮತ್ತು ದಾಖಲಾಗಲಿ ಎಂಬ ಕಾರಣದಿಂದ ಇಲ್ಲಿ ಪ್ರಕಟ.
ಚಾಮರಾಜನಗರದ ದೀನಬಂಧು ಸಂಸ್ಥೆಯ ಸಂಸ್ಥಾಪಕರು, ಗೌರವ ಕಾರ್ಯದರ್ಶಿಗಳಾದ ಪ್ರೋ. ಜಿ.ಎಸ್.ಜಯದೇವಣ್ಣನರಿಗೆ ಬರೆದ ಪತ್ರ.
ನನಗೆ ಪುನರ್ಜನ್ಮ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ, ಅಂಬೇಡ್ಕರ್ ಮತ್ತು ಗಾಂಧೀಜಿ ಆಶಯಗಳನ್ನು ಸಕಾರಗೊಳಿಸುತ್ತಿರುವ ದೀನಬಂಧು ಸಂಸ್ಥೆಯ ಸಾನಿಧ್ಯಕ್ಕೆ ನನ್ನ ಕುಟುಂಬವು ಸ್ಥಳಾಂತರಗೊಳ್ಳಲು ಪ್ರೇರಣೆಯಾದ ಅಂಶದ ಬಗ್ಗೆ ತೊದಲ್ನುಡಿಗಳಲ್ಲಿ ವಿವರಿಸಿರುವೆ.
-----------------------------------------------------------------
ಪ್ರೀತಿಯ ಅಣ್ಣನವರಿಗೆ ಗೌರವಪೂರ್ವಕ ಮತ್ತು ಪ್ರೀತಿಪೂರ್ವಕ ಪ್ರಣಾಮಗಳು.
ಶಾಲೆಯಲ್ಲಿರುವ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ಪೋಟೊಗಳು ನನಗೆ ಬೇಕು..ಖರ್ಚು ಭರಿಸಲು ಸಿದ್ಧ.
ನಿಮ್ಮ ಬರಹ ಮತ್ತು ವ್ಯಕ್ತಿತ್ವದೊಟ್ಟಿಗೆ ಶಾಲೆಯ ಮುಂಭಾಗದಲ್ಲಿರುವ ಬುದ್ಧಣ್ಣ, ಆಶ್ರಮದಲ್ಲಿರುವ ಗಾಂಧೀ ಮಹಾತ್ಮ ಹಾಗೂ ಶಾಲೆಯಲ್ಲಿನ ಗಾಂಧೀಜಿ ಮತ್ತು ಬಾಬಾ ಸಾಹೇಬರ ಪೋಟೊಗಳು ನಾನು ದೀನಬಂಧುಗೆ ಬರಲು ಪ್ರಮುಖ ಕಾರಣ. ಅಂದರೆ ಈ ಮಹಾನ್ ವ್ಯಕ್ತಿಗಳ ಸಂದೇಶಗಳನ್ನು ಸಾಕಾರಗೊಳಿಸುವ ಚೇತನಗಳ ಜೊತೆ ಇರುವ ಆಶೀರ್ವಾದ ಮತ್ತು ಸಾನಿಧ್ಯಕ್ಕಾಗಿ. ಏನೂ ಮಾಡದೇ ಸುಮ್ಮನೇ ಇರುವುದರ ಮೂಲಕ ತಪ್ಪು ಮಾರ್ಗ ತುಳಿಯುವುದರಿಂದ ಹೊರತಾಗಿ ಜಡವಾಗಿರುವುದು ನನಗೆ ನೆಮ್ಮದಿಯೇ ಸರಿ!.
ನಾನು ಹುಟ್ಟಿದ್ದು ೧೯೮೨ರಲ್ಲಿ ಎರಡನೇ ಮಗನಾಗಿ. ಅಪ್ಪನಿಗೆ ಮೊದಲ ಮಗುವೇ ಹೆಣ್ಣಾಗಲೀ ಎಂಬ ಹೆಬ್ಬಯಕೆ ಇತ್ತು. ಆದರೆ ಹುಟ್ಡಿದ್ದು ಗಂಡು. ನೋಡಲು ಮುದ್ದು, ಸಹಿಸಿಕೊಂಡರು. ಎರಡನೇಯದಾದರೂ ಹೆಣ್ಣಾಗಲೀ ಎಂಬ ತೀವ್ರ ನಿರೀಕ್ಷೆ. ಅಮ್ಮ ಮತ್ತೇ ಗರ್ಭಿಣಿ. ಆದರೆ ಒಳಗೊಳಗೆ ತೀವ್ರ ತಳಮಳ, ಮತ್ತೇ ಗಂಡಾದರೆ ಎಂಬ ಕಾರಣಕ್ಕೆ. ಆಗಾಗಿ ಗರ್ಭಪಾತಕ್ಕೆ ಪ್ರಯತ್ನ ಪಟ್ಟಿದ್ದು ವ್ಯರ್ಥವಾಗಿ, ಹುಟ್ಡಿದ್ದು ನಾನು. ನೋಡಲು ಮಂದ ಬಣ್ಣ, ಬೆಳೆಯುತ್ತಾ ಬೆಳೆಯುತ್ತಾ ಮಂಕು ಕವಿದ ಮಂದ ಹುಡುಗನಂತೆ ಹೆತ್ತವರಿಗೆ ದೊಡ್ಡವರಿಗೆ ಕಾಣಲಾರಂಭಿಸಿದೆ. ಯಾವುದಕ್ಕೂ ಹಠವಿಲ್ಲ, ತುಂಟತನವಿಲ್ಲ. ಅಪ್ಪನ ಕೋಪ ಮತ್ತು ನಿರ್ಲಕ್ಷ್ಯಕ್ಕೆ ತುತ್ತಾಗುತ್ತಿದ್ದೆ. ಇದಿಷ್ಡೂ ಅಮ್ಮ ಹೇಳಿದ್ದು. ನಾಲ್ಕುವರೆ ವರ್ಷ ತುಂಬಿದ ನಂತರ ಅಪ್ಪ ಕೆಲಸ ಮಾಡುತ್ತಿದ್ದ ಮನೆಯ ಹತ್ತಿರದಲ್ಲೆ ಇದ್ದ ಪ್ರಾಥಮಿಕ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು. ಒಮ್ಮೆ ಅಪ್ಪ ಸ್ಲೇಟಿನಲ್ಲಿ ಅ, ಆ ಅಕ್ಷಗಳನ್ನು ಉಚ್ಚರಿಸುತ್ತಾ ಬರೆದು, ನನಗೂ ಸಹ ಉಚ್ಚರಿಸುತ್ತಾ ಅಕ್ಷರಗಳನ್ನು ತಿದ್ದಲು ಹೇಳಿದರು. ಆದರೆ ನಾನು ಏನೂಕ್ಕೋ ಯಾವದಕ್ಕೂ ಪ್ರತಿಕ್ರಿಯೆ ತೋರದಿದ್ದಾಗ ಅಪ್ಪನ ಕೋಪ ನೆತ್ತಿಗೇರಿತು. ಅಪ್ಪ ಬೀಡಿ ಸೇದುತ್ತಿದ್ದ ಕಾರಣ ಜೇಬಿನಲ್ಲಿದ್ದ ಬೆಂಕಿ ಪಟ್ಟಣದಿಂದ ಕಡ್ಡಿ ಗೀರಿ ನನ್ನ ಕಾಲ ಬೆರಳಿಗೆ ಬೆಂಕಿ ತಾಕಿಸಿದರು. ಆದರೂ ನಾನು ಬಾಯಿ ಬಿಡಲಿಲ್ಲ. ಮೇಜಿನ ಮೇಲೆ ಕೂತಿದ್ದ ನನ್ನನ್ನು ಅನಾಮತ್ತು ಮೇಲಕ್ಕೆತ್ತಿದ್ದ ಅಪ್ಪ, ನಾನು ಬಾಯಿ ಬಿಡದಿದ್ದರೆ ಕೆಳಗೆ ಬಿಸಾಕುತ್ತೇನೆ ಎಂದು ಹೆದರಿಕೆಯ ಪ್ರಯತ್ನವನ್ನು ಅಪ್ಪ ಮುಂದುವರೆಸುತ್ತಿರುವಾಗಲೇ, ಅಪ್ಪನ ಸಹದ್ಯೋಗಿ ಉಮಾಮಹೇಶ್ವರ್ ಅಂಕಲ್ ಅಪ್ಪನ ಕೈಗಳಿಂದ ನನ್ನನ್ನು ಬಿಡಿಸಿ ಅವರ ಎದೆಗವುಚಿಕೊಂಡರು.ಅದೇ ಮೊಟ್ಟಮೊದಲು ಗಂಡಸ್ಸಿನ ಒರ್ವನ ಅಪ್ಪ ಕೊಡಬಹುದಾದ ಹಿತವಾದ ಸಂರಕ್ಷಣೆಯ ಬೆಚ್ಚುಗೆಯ ಅಪ್ಪುಗೆ ದೊರಕಿತ್ತು. ಅಪ್ಪ ಹಿರಣ್ಯ ಕಶ್ಯಪನಂತೆ ಉಗ್ರವಾಗಿ ಕಾಣುತ್ತಿದ್ದರೆ, ನನಗೆ ಭಕ್ತ ಪ್ರಹ್ಲಾದನಿಗರಬಹುದಾದ ಯಾವ ಆತ್ಮವಿಶ್ವಾಸವೂ, ಧೈರ್ಯವೂ ಇರಲಿಲ್ಲ. ಮುಂದೆ ನನ್ನ ಶಾಲಾ ಶಿಕ್ಷಣ ಆರಂಭವಾಗುವರೆಗೂ ನನ್ನನ್ನು ಉಮಾಮಹೇಶ್ವರ್ ಸರ್ ನಾನು ಎಚ್ಚರವಿದ್ದಾಗಲೆಲ್ಲಾ ನನ್ನನ್ನು ಎತ್ತಿಕೊಂಡೆ ಇರುತ್ತಿದ್ದರು. ಅಪ್ಪನ ದೈಹಿಕ ಸ್ಪರ್ಶದಿಂದ ಮತ್ತು ಭಾವನಾತ್ಮಕ ವಲಯದಿಂದ ದೂರ ಉಳಿದೆ.
ಮುಂದೆ ಶಾಲೆಗೆ ಸೇರುವ ಸಮಯ ಬಂದಾಗ ಚಿಕ್ಕಮಗಳೂರಿನಲ್ಲಿದ್ದ ನನ್ನ ತಂದೆಯ ಅಣ್ಣ ದೇವಿರಪ್ಪ-ತಾಯಿಯ ಅಕ್ಕ ಭಾಗ್ಯಮ್ಮ ಇವರ ಬಳಿಗೆ ಕಲಿಯಲು ಹೋಗಬೇಕಾಯಿತು. ನನ್ನನ್ನು ಕಳುಹಿಸುವಾಗ ಅಮ್ಮ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಏಕೆಂದರೆ ಅಣ್ಣನನ್ನು ಮೂರುವರ್ಷ ಇರುವಾಗಲೇ ಅವರೊಟ್ಟಿಗೆ ಓದಲು ಕಳುಹಿಸಲಾಗಿತ್ತು. ದೊಡ್ಡಪ್ಪನವರಿಗೆ ತಮ್ಮ ಒಡಹುಟ್ಟಿದವರೆಲ್ಲರೂ, ಬಂಧುಗಳೆಲ್ಲರೂ ಉತ್ತಮ ಬದುಕು ನಡೆಸಬೇಕೆಂಬ ಕಾರಣಕ್ಕೆ ತಮ್ಮ-ತಂಗಿಯರ ಮಕ್ಕಳನ್ನೂ ಸಹ ತಮ್ಮ ಸುಪರ್ದಿಯಲ್ಲಿ ಶಿಕ್ಷಣ, ಬದುಕು ಕೊಡಲಾರಂಭಿಸಿದರು. ಅವರಿಗೆ ಯಾವುದೇ ಗಟ್ಟಿ ಕೆಲಸ, ಆದಾಯವಿಲ್ಲದಿದ್ದರೂ ಹೆಸರಿಗೆ ತಕ್ಕಂತೆ ದೇವರಾಗಿದ್ದರು. ನಾನು ಚಿಕ್ಕಮಗಳೂರಿಗೆ ಹೊದಾಗ ಮೂರು ಅಂಕಣದ ಒಂದು ಪುಟ್ಟ ಬಾಡಿಗೆ ಮನೆ. ಆದರೆ ಮನೆಯಲ್ಲಿ ನಾವು ಇದ್ದದ್ದು ೧೧ ಜನ.ಮುಂದೆ ದೊಡ್ಡಪ್ಪನವರಿಗೆ ಕ್ಲರ್ಕ್ ಕೆಲಸ ಸಿಕ್ಕಿತು. ದೊಡ್ಡ ಗುಣಗಳ ದೊಡ್ಡಪ್ಪ ನಮ್ಮನ್ನು ಬಹಳ ಅಕ್ಕರೆಯಿಂದಲೇ ಸಾಕುತ್ತಿದ್ದರು. ಅವರನ್ನೂ ಇಂದಿಗೂ-ಎಂದಿಗೂ ನಾವೆಲ್ಲರೂ ಅಪ್ಪಾಜಿ ಅಂತಲೇ ಕರೆಯುತ್ತೇವೆ.
೧೯೯೦-೯೧ನೇ ಸಾಲು, ಅಷ್ಟರಲ್ಲಾಗಲೇ ದೊಡ್ಡಪನವರಿಗೆ ದಾವಣಗೆರೆಗೆ ವರ್ಗವಾಗಿತ್ತು. ಏನೂ ದುರ್ದೈವವೋ ಶಾಲೆಗೆ ಹೋಗುತ್ತಿದ್ದ ಏಳು ಮಕ್ಕಳಲ್ಲಿ ಒಂದು ತರಗತಿ ಮುಂದಿದ್ದ ಮೂರು ಗಂಡು ಮಕ್ಕಳು ಪ್ರತಿಷ್ಟಿತ ಅಂಗ್ಲ ಮಾಧ್ಯಮದ Loods Boys ಶಾಲೆಗೆ ಮತ್ತು ಉಳಿದ ನನ್ನ ಒರಗೆ ಮತ್ತು ತರಗತಿಯ ಮೂರು ಹೆಣ್ಣು ಮಕ್ಕಳು ಸಹ Saint Paul's Girls Convent ಶಾಲೆಗೆ ಹೋಗುತ್ತಿದ್ದರು. ಉಳಿದ ನಾನೋರ್ವ ಮಾತ್ರ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗೆ ಹೋಗಬೇಕಾಯಿತು. ನಾನು ಅವಾಗ ನಾಲ್ಕನೆ ತರಗತಿಯಲ್ಲಿದ್ದೆ. ಒರಗೆಯ ಅಣ್ಣಂದಿರ-ತಂಗಿಯರ ಯೂನಿಫಾರ್ಮಗಳು, ಪಠ್ಯಪುಸ್ತಕಗಳು, ನೋಟುಬುಕ್ಕುಗಳು, ಟೈ ಬೆಲ್ಟ್ ಇವ್ಯಾವು ನನಗಿಲ್ಲದ್ದರ ಬಗ್ಗೆ ಮರುಗುತ್ತಿದ್ದೆ, ಕೊರಗುತ್ತಿದ್ದೆ, ಕುಗ್ಗುತ್ತಿದ್ದೆ. ನನಗೆ ಗೊತ್ತಿಲ್ಲದೆ ಕೀಳರಿಮೆ ಬೆಳೆಯುತ್ತಾ ಹೋಯಿತು. ನಮ್ಮ ಕನ್ನಡ ಶಾಲೆಗೆ ಯ್ಯೂನಿಫಾರ್ಮ್ ಇತ್ತಾದರೂ ಕಡ್ಡಾಯವಿರಲಿಲ್ಲ. ಶರ್ಟು ಮೊಣಕಾಲಿನವರೆಗೂ ಬರುತ್ತಿದ್ದರೆ ಚಡ್ಡಿಯೂ ಸಹ ಬೇಕಾಗಿರಲಿಲ್ಲ. ನನ್ನ ಶಾಲೆ ಶುರುವಾಗುತ್ತಿದ್ದು ಮಧ್ಯಾಹ್ನ ೧೨.೩೦ಕ್ಕೆ. ಒರಗೆಯವರ ಕಾನ್ವೆಂಟ್ ಶಾಲೆ ಬೆಳಿಗ್ಗೆ ೯ ಗಂಟೆಗೆ. ಸಮಯವಿರುತ್ತಿದ್ದ ಕಾರಣ ಒಮ್ಮೆ ಅವರ ಶಾಲೆಗಳನ್ನು ನೋಡಲು ಅವರಿಗೆ ಗೊತ್ತಿಲ್ಲದಂತೆ ಹೋದೆ. ಅಬ್ಬಬ್ಬಾ! ಆ ದೊಡ್ಡ ಗೇಟುಗಳು, ದೊಡ್ಡ ಸಂಖ್ಯೆಯ ಹುಡುಗ-ಹುಡಗಿಯರ ಸಮೂಹ, ಅವರ ಅಂದ-ಚೆಂದದ ಬ್ಯಾಗುಗಳು, ಯ್ಯೂನಿಫಾರ್ಮಗಳು, ಟೈ ಬೆಲ್ಟುಗಳು, ಪಾಲಿಶ್ನಿಂದಾಗಿ ಪಳ ಪಳ ಹೊಳೆಯುತ್ತಿದ್ದ ಶೂಗಳು ಇವೆಲ್ಲವೂ ನಮ್ಮ ಶಾಲೆ, ನಾನು, ನನ್ನ ಸಹಪಾಠಿಗಳಲ್ಲಿ ಇಲ್ಲದ ಕಾರಣಕ್ಕಾಗಿ ಬಹಳ ನೊಂದುಕೊಳ್ಳುತ್ತಿದ್ದೆ. ಎಲ್ಲರೊಂದಿಗೂ ಮಾತು ತೀರಾ ಕಮ್ಮಿಯಾಯಿತು. ಯಾರೂ ಇಲ್ಲದಾಗ ಬಹಳ ಸಲ ಒಬ್ಬೊಬ್ಬನೇ ಮಾತನಾಡಿಕೊಳ್ಳುತ್ತಿದ್ದೆ. ರಾತ್ರಿ ಮಲಗುತ್ತಿದ್ದ ವೇಳೆ ಅಮ್ಮನನ್ನು ನೆನೆಸಿಕೊಂಡೆ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಆದರೆ ಈಗ ಹೀಗೆಲ್ಲಾ ಆಗಿದ್ದರ ಬಗ್ಗೆ ನನಗೀಗ ಯಾವುದೇ ಬೇಸರವಿಲ್ಲ, ನನ್ನ ಹೆತ್ತವರಾಗಲೀ, ದೊಡ್ಡಪ್ಪನವರಾಗಲೀ ಯಾವುದನ್ನು ಬಹಳ ಸೂಕ್ಷ್ಮತೆಯಿಂದ ಅವಲೋಕಿಸಿ, ಅಲೋಚಿಸಿ ಹೀಗೆ ಮಾಡಿದ್ದಲ್ಲ. ಏನೋ ಕಾಲದ ಕರೆ ಅಷ್ಟೇ. ಅಂದಿನ ಎಲ್ಲಾ ನೋವುಗಳು ಈಗಿಲ್ಲ. ಹೈಸ್ಕೂಲಿಗೆ ಬರುತ್ತಲೇ ಕೆಲವು ವ್ಯಸನಗಳು ಮತ್ತು ವಿಲಕ್ಷಣಗಳ ನಡುವೆಯೇ ಅಪ್ಪನನ್ನು ಒಪ್ಪಿಕೊಂಡು ಪ್ರೀತಿಸಲಾರಂಭಿಸಿದೆ. ಅವರೂ ಸಹ. ಆದರೆ ನನ್ನದೇ ರೀತಿಯಲ್ಲಿ ಇವತ್ತಿನ ಕೆಲವು-ಹಲವು ಮಕ್ಕಳು ಇರುವುದು ಕಂಡಾಗ....... ಮಕ್ಕಳ ಬೆಳವಣಿಗೆ, ಶಿಕ್ಷಣ ಒಟ್ಟಾರೆ ಜನಜೀವನವೂ ಎಂಬುದು ಎಂದೆಂದಿಗೂ ತಾರತಮ್ಯವೇ????????
ಇದೇ ಸಂದರ್ಭದಲ್ಲಿ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ನನ್ನ ಜೀವನಕ್ಕೆ ಮಹತ್ವದ ತಿರುವು ದೊರೆಯಿತು. ಪುನರ್ಜನ್ಮ ದೊರೆತಿದೆಂದು ಹೇಳಿದರೆ ಯಾವುದೇ ಉತ್ಪ್ರೇಕ್ಷೆಯಿಲ್ಲ. ಶಾಲಾ ಮಕ್ಕಳಿಗೆ ವಿಶೇಷವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ಡಾ.ಬಿ.ಆರ್. ಅಂಬೇಡ್ಕರ್ ರವರ ಜೀವನಾಧಾರಿತ ಚಲನಚಿತ್ರವನ್ನು ತೋರಿಸುವ ಏರ್ಪಾಡಾಯಿತು. ದಾವಣಗೆರೆಯ ಪಿ.ಬಿ.ರಸ್ತೆಯಲ್ಲಿ ಈಗಲೂ ಇರುವ ಅರುಣ ಚಿತ್ರಮಂದಿರದಲ್ಲಿ ಬಾಬಾ ಸಾಹೇಬರ ಚಲನಚಿತ್ರ ವೀಕ್ಷಿಸುವ ಪುಣ್ಯ ನನ್ನದಾಯಿತು. ಚಿತ್ರ ನೋಡುವಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಬುದ್ಧನಿಗೆ ಬೋಧಿ ವೃಕ್ಷದ ಕೆಳಗಡೆ ಜ್ಞಾನದೋಯವಾದರೆ ನನಗೆ ದಾವಣಗೆರೆಯ ಅರುಣ ಚಿತ್ರಮಂದಿರದಲ್ಲಿ. ನನ್ನನ್ನು ನಾನು ಅಂಬೇಡ್ಕರ್ ರವರ ಜಾಗದಲ್ಲಿ, ಪಾತ್ರದಲ್ಲಿ ಭಾವಿಸಿಕೊಂಡೆ. ನಾನು ಸಹ ಈ ನನ್ನೆಲ್ಲಾ ನೋವು, ಅಪಮಾನ, ಕೀಳರಿಮೆಗಳಿಂದ ಹೊರಬಂದು ಸಾಧಕನಾಗಬೇಕೆಂದರೆ ವಿದ್ಯೆಯೊಂದೇ ಸಾಧನ ಎಂಬುದನ್ನು ಚೆನ್ನಾಗಿ ಖಾತ್ರಿ ಮಾಡಿಕೊಂಡೆ. ಅಂಬೇಡ್ಕರ್ ರವರು ನನ್ನ ಮೇಲೆ ಬೀರಿರುವ ಪ್ರಭಾವವನ್ನು ಮಾತುಗಳಲ್ಲಿ ಹೇಳಿದರೆ ಬಹಳ ಕಡಿಮೆಯಾದಿತು, ಸಪ್ಪೆಯಾದಿತು. ಮೇಲ್ವರ್ಗವೆಂದು ಕರೆದುಕೊಳ್ಳುತ್ತಿದ್ದ ಲಿಂಗಾಯಿತರ ಮನೆಯಲ್ಲಿ ಹುಟ್ಡಿದ ಕಾರಣಕ್ಕೋ, ಅಂತಹ ವೈಶಾಲ್ಯದ ಕೊರತೆಯ ಕಾರಣಕ್ಕೊ ಅಲ್ಲಿಯವರೆಗೂ ಅಂಬೇಡ್ಕರ್ ರವರ ಬಗ್ಗೆ ಪರಿಚಯವೇ ಇರಲಿಲ್ಲ. ಸಮುದಾಯದಲ್ಲಿದ್ದ ಎಲ್ಲ ತರಹದ ಅಸ್ಪೃಶ್ಯತೆಯ ಆಚರಣೆಯ ಬಗ್ಗೆ ಅಸಹ್ಯತನ ಅಸಹಾಯಕ ಸ್ಥಿತಿಯಲ್ಲಿ ವ್ಯಕ್ತವಾಗುತ್ತಿದ್ದವು. ಈಗಲೂ ಬಾಡಿಗೆ ಮನೆ ಹಿಡಿಯುವಾಗ ಜಾತಿ ಪದ್ಧತಿಯ ಕ್ರೌರ್ಯದ ಅನುಭವವಾಗುತ್ತಿದೆ.
ಅಂಬೇಡ್ಕರ್ ರವರ ಜೀವನಾಧಾರಿತ ಚಲನಚಿತ್ರ ವೀಕ್ಷಣೆಯ ನಂತರ ವಿದ್ಯೆ ಎಲ್ಲವನ್ನೂ ಗೆಲ್ಲಬಲ್ಲದು, ದೊರಕಿಸಿಕೊಡಬಲ್ಲದು ಎಂಬುದು ಮನದಟ್ಟಾದ ಮೇಲೆ ನಾನು ಬಹಳ ಅಂತರ್ಮುಖಿಯಾದೆ. ಓದಿನಲ್ಲಿ ಪ್ರಗತಿ ಕಾಣಲಾರಂಭಿಸಿತು. ಕೆಲವು ತಿಂಗಳ ನಂತರ ಉತ್ತಮವೆನಿಸಿದ ಪಕ್ಕದ ಕನ್ನಡ ಮಾಧ್ಯಮದ ಖಾಸಗಿ ಶಾಲೆಗೆ ದಾಖಲಿಸಿದರು. ಮರುವರ್ಷದಿಂದ ತರಗತಿ ನಾಯಕನನ್ನಾಗಿ ಶಿಕ್ಷಕರು ನೇಮಿಸಲಾರಂಭಿಸಿದರು. ಮುಂದೆ ಪ್ರೌಢಶಾಲಾ ಹಂತದಲ್ಲಿ ಗಾಂಧೀಜಿಯವರ ಪರಿಚಯವಾಯಿತು. ಗೌರವ ಬೆಳೆಯಿತು. ಅವರ ಬಗ್ಗೆ ಮೊದಲು ಓದಿದ್ದೆ ಅವರ ಆತ್ಮಚರಿತ್ರೆ. National Book Trust ನಿಂದ ಪ್ರಕಟಿತವಾದ ನನ್ನ ಸತ್ಯಾನೇಷ್ವಣೆ ಪುಸ್ತಕ ಬಹುಮಾನವಾಗಿ ಬಂದಿತ್ತು. ಪದವಿ ಹಂತದಲ್ಲಿ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ನಡುವೆ ತುಲನಾತ್ಮಕ ದೃಷ್ಟಿಕೋನ ಬೆಳೆಯಲಾರಂಭಿಸಿತು. ಗಾಂಧೀಜಿ ಮತ್ತು ಅಂಬೇಡ್ಕರ್ ರವರ ನಡುವೆ ಸಾಮ್ಯತೆ ಮೂಡಿಸುವ, ಮೂಡಿಸುವವರ ಚಿಂತನೆಗಳಿಗೆ ಮಾರು ಹೋದೆ. ಇವೆಲ್ಲದರ ಮಧ್ಯೆಯೇ ಕುಟುಂಬದ ಸಾಮಾಜಿಕ ಹಿನ್ನಲೆಯ ಕಾರಣಕ್ಕಾಗಿ ನನ್ನ ಸಮುದಾಯ ಲಿಂಗಾಯಿತ ವರ್ಗಕ್ಕೆ ಸೇರಿದ್ದರ ಬಗ್ಗೆ ಹೆಮ್ಮೆಯೂ, ಆದರೆ ವಾಸ್ತವದಲ್ಲಿ ಬಸವಣ್ಣನ ಮೂರ್ತಿ ಪೂಜೆ ನಡೆಯುತಿತ್ತೇ ವಿನಃ, ಬಸವಣ್ಣನ ಮತ್ತು ಲಿಂಗಾಯಿತ ಧರ್ಮದ ವಿಚಾರಗಳಿಂದ ಬಹಳ ದೂರವೇ ಉಳಿದಂತಹ ಬದುಕಿನ ಆಚರಣೆಗಳ ಬಗ್ಗೆ ಅಸೈರಣೆ ಬೆಳೆದು ಲಿಂಗಾಯಿತ ಧರ್ಮದ ಬಗ್ಗೆ ಹೊಂದಿದ್ದ ಹೆಮ್ಮೆಯ ಭಾವಕ್ಕಿಂತ ಪಾಪ ಪ್ರಜ್ಞೆ ಕಾಡಲಾರಂಭಿಸಿದೆ. ೬ನೇ ಕ್ಲಾಸಿನಲ್ಲಿದ್ದಾಗ ಧರಿಸಿದ್ದ ಲಿಂಗು ೧೦ನೇ ಕ್ಲಾಸಿಗೆ ಬರುವ ಹೊತ್ತಿಗೆ ದೂರವಾಗಿತ್ತು.
ಇವೆಲ್ಲದರ ಜೊತೆಗೆ ಬದುಕು ಮತ್ತು ಮನಸ್ಸು ಅಲೆಮಾರಿಯಂತಾಗಿತ್ತು. ಉತ್ತರ ಸಿಕ್ಕಿದ್ದೂ ನೀವು ಮತ್ತು ನಿಮ್ಮ(ನಮ್ಮ) ದೀನಬಂಧು ಸಂಸ್ಥೆಯಲ್ಲಿ. ನನ್ನ ಮಕ್ಕಳು ಸಹ ತಳ ಸಮುದಾಯದ ಮಕ್ಕಳೇ ಹೆಚ್ಚಿಗೆ ಇರುವ ಮತ್ತು ಮಾನವ ಧರ್ಮ ಪಾಲನೆಯಾಗುತ್ತಿರುವ ದೀನಬಂಧು ಶಾಲೆಯಲ್ಲಿ ಕಲಿಯುವಂತಾದರೆ ನಮ್ಮ ಪುಣ್ಯ ಎಂದು ಭಾವಿಸಿ ನಿಮ್ಮ ಆಶೀರ್ವಾದ ಮತ್ತು ಸಾನಿಧ್ಯದಲ್ಲಿದ್ದೇವೆ. ಈ ರೀತಿಯ ಬದುಕು ಆಯ್ಕೆ ಮಾಡಿಕೊಂಡ ಬಗ್ಗೆ ಬಹಳ ಹೆಮ್ಮೆಯಿದೆ.
ಇತ್ತೀಚೆಗೆ ಅಸುರನ್ ಅಂತಾ ತಮಿಳು ಚಲನಚಿತ್ರ ಬಹಳ ಸುದ್ಧಿ ಮಾಡಿತ್ತು. ಧನುಷ್ ಅಭಿನಯದ ಚಲನಚಿತ್ರ. ನಮ್ಮಹಲವು ಪ್ರಗತಿಪರಮಿತ್ರರು, ದಸಂಸ ಸಂಘಟನೆ ಇನ್ನೂ ಮುಂತಾದವರು ಬಹಳ ಮೆಚ್ಚಿ ಸಾಮಾಜಿಕ ಜಾಲತಾಣದಲ್ಲಿ ಮಾತಾಡಿದ್ರು. ನಾನು ಕೂಡ ಸಿನೆಮಾ ನೋಡಿದ್ದೆ. ಸಿನೆಮಾದ ತಿರುಳು, ಭೂಮಾಲೀಕರ ಶೋಷಣೆಗೆ ಒಳಗಾದ ತಳ ಸಮುದಾಯದವರು ಸಿಡಿದೇಳುತ್ತಾರೆ. ಎರಡೂ ಕಡೆ ಕೊಲೆ ಸಾವುಗಳಾಗುತ್ತವೆ. ಕೊನೆಯಲ್ಲಿ ಶೋಷಿತ ಸಮುದಾಯದ ಮಗ ಮಾಡಿದ ಕೊಲೆಯನ್ನು ತನ್ನ ಮೇಲೆ ಹೊತ್ತು ಜೈಲಿಗೆ ಹೋಗಲು ಸಿದ್ಧನಾದ ನಾಯಕ ಪಾತ್ರಧಾರಿ "ನಮ್ಮತ್ರ ಹಣ, ಆಸ್ತಿ ಇದ್ರೆ ಸುಲಭವಾಗಿ ಬೇರೆಯವರು ಕಬಳಿಸಬಹುದು. ಆದರೆ ವಿದ್ಯೆ ನಮ್ಮ ಆದ್ಯತೆಯಾದರೆ ಯಾರಿಂದಲೂ ಕಬಳಿಸಲು ಸಾಧ್ಯವಿಲ್ಲ. ವಿದ್ಯೆಯಿಂದ ಅಧಿಕಾರ, ಅಧಿಕಾರದಿಂದ ಸ್ವಾಭಿಮಾನ ಮತ್ತು ಆತ್ಮಗೌರವದ ಬದುಕು ಕಟ್ಟಿಕೊಳ್ಳಲು ಸಾಧ್ಯ ಅಂತೇಳ್ತಾನೆ" ರೋಷ ಆವೇಶದಲ್ಲಿದ್ದ ಕುದಿಯಿತ್ತಿದ್ದ ಮಗನಿಗೆ ಶಿಕ್ಷಣ ಎಷ್ಟು ಮುಖ್ಯವೆಂದು ತಿಳಿಸುತ್ತಾನೆ. ನಮ್ಮ ಆದೆಷ್ಟೋ ಬಡಾಯಿ ಚಳವಳಿಕಾರರಿಗಿಂತ, ಹುಸಿ ಓರಟು(ಹೋರಾಟ)ಗಾರರಿಗಿಂತ ದೀನಬಂಧು ಸಂಸ್ಥೆ ಮಾಡುತ್ತಿರುವುದು ಎಷ್ಟೊದು ಮಹತ್ಕಾರ್ಯವಲ್ಲವೇ ಎಂದು ನೆನೆದು ಕಣ್ಣಾಲಿಗಳು ಖುಷಿ,ಸಾರ್ಥಕ ಮತ್ತು ಸಂತೃಪ್ತ ಭಾವದಿಂದ ಒದ್ದೆಯಾದವು. ದೀನಬಂಧು ಸಂಸ್ಥೆಯು ಶೋಷಿತ ಮತ್ತು ತಳ ಸಮುದಾಯದ ಏಳಿಗಾಗಿ ದುಡಿಯುತ್ತಿರುವ ಪ್ರಮಾಣಿಕ ಸಂಸ್ಥೆ. ಎಲ್ಲಾ ಕಾಲದ ಜಟಿಲತೆಗಳಿಗೂ, ಸಮಸ್ಯೆಗಳಿಗೂ, ಸಾವಲುಗಳಿಗೂ ಉತ್ತರ ಮತ್ತು ಪರಿಹಾರವಾಗಬಲ್ಲ ನನ್ನ ಬಾಬಾ ಸಾಹೇಬರ ಮತ್ತು ಗಾಂಧೀಜಿಯವರ ಚಿಂತನೆಗಳನ್ನು ಹಾಗೂ ಬುದ್ಧ, ರಮಣ, ರಾಮಕೃಷ್ಣರ ಆಧ್ಯಾತ್ಮವನ್ನು ಸಕಾರಗೊಳಿಸುತ್ತಿರುವ ದೀನಬಂಧು ಸಂಸ್ಥೆಯ ದೀನಬಂಧು ಆತ್ಮಗಳ ನಡುವೆ ಎಂದೆಂದಿಗೂ ಇದೇ ರೀತಿಯಲ್ಲಿ ಮಾನವೀಯ ಅಂತಃಕರಣ ಜಾಗೃತವಾಗಿರಲಿ ಎಂದು ಹೃನ್ಮನದಿಂದ, ಸತ್ಕಂಪನದಿಂದ ಆಶಿಸುತ್ತೇನೆ, ಹಾರೈಸುತ್ತೇನೆ.
ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರುತ್ತದೆಂಬ ಆಶಾಭಾವದಿಂದ.
ಗಿರೀಶ ಟಿ. ಪಿ.
With
Comments
Write a comment...

